Aims of education and library: ಶಿಕ್ಷಣದ ಗುರಿ ಮತ್ತು ಗ್ರಂಥಾಲಯ
ಗುರಿ ಎನ್ನುವುದು ಮೊದಲೇ ನಿರ್ಧರಿಸಿದ ಗಮ್ಯವಾದ್ದರಿಂದ ಪ್ರಸ್ತುತದ ಚಟುವಟಿಕೆಗಳಿಗೆ ದಾರಿ ತೋರುತ್ತದೆ. ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಚಟುವಟಿಕೆ ಕೈಗೊಳ್ಳುವುದರಿಂದ ಪ್ರಜ್ಞಾಪೂರ್ವಕವಾಗಿ ಮತ್ತು ಬುದ್ದಿವಂತಿಕೆಯಿಂದ ಕೆಲಸ ಮಾಡಲು ಸಹಾಯಕವಾಗುತ್ತದೆ. ಗಮ್ಯವನ್ನು ಪ್ರಜ್ಞಾಪೂರ್ವಕವಾಗಿ ತಳೆಯುವುದಾದ್ದರಿಂದ ಅವು ಅರ್ಥಪೂರ್ಣವೂ ನಿರಂತರವೂ ಆಗಿರುತ್ತದೆ. ಅದು ನಾವು ಕೈಗೊಳ್ಳುವ ಚಟುವಟಿಕೆಗೆ ತರ್ಕವನ್ನು ಮತ್ತು ಸಮಂಜಸತೆಯನ್ನು ಒದಗಿಸುತ್ತದೆ.
ಶಿಕ್ಷಣದ ಗುರಿಗಳು ವಿಶಾಲವಾಗಿದ್ದು ಅವು ಭಾಷಾ ಶಿಕ್ಷಣದ ಗುರಿಗಳನ್ನೂ ಒಳಗೊಂಡಿರುತ್ತವೆ. ಮತ್ತು ಭಾಷಾಶಿಕ್ಷಣದ ಧ್ಯೇಯೋದ್ದೇಶಗಳನ್ನು ಈಡೇರಿಸಲು ಹಾಗೂ ಆ ಮೂಲಕ ಶಿಕ್ಷಣದ ಗುರಿಗಳನ್ನು ತಲುಪಲು ಶಾಲೆಯಲ್ಲಿ ಗ್ರಂಥಾಲಯದ ಅಗತ್ಯವನ್ನು ಅವು ಒತ್ತಿ ಹೇಳುತ್ತವೆ.ಭಾರತದ ಸನ್ನಿವೇಶದಲ್ಲಿ ಶಿಕ್ಷಣದ ಗುರಿಗಳನ್ನು 1986ರ ರಾಷ್ಟ್ರೀಯ ಶಿಕ್ಷಣನೀತಿ, 2005ರ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟುಗಳಂತಹಾ ವರದಿಗಳಲ್ಲಿ ಪ್ರಸ್ತಾಪಿಸಲಾಗಿದೆ. ಭಾರತವು ಜಾತ್ಯತೀತ ಬಹುಸಂಸ್ಕೃತಿಯ ಮಿಶ್ರರೂಪಿ ಸಮಾಜವೆಂಬ ಸಂವಿಧಾನದ ದೃಷ್ಟಿಕೋನದಿಂದ ಮಾರ್ಗದರ್ಶನ ಪಡೆದು ಸಾಮಾಜಿಕ ನ್ಯಾಯ ಮತ್ತು ಸಮಾನತೆಗಳ ಮೌಲ್ಯದ ಮೇಲೆ ಈ ವರದಿಗಳು ಶಿಕ್ಷಣದ ಗುರಿಯನ್ನು ಸ್ಥಾಪಿಸಿವೆ. ವ್ಯಕ್ತಿಯು ನಿರ್ಧಾರಗಳನ್ನು ತಳೆಯುವ ಸಾಮರ್ಥ್ಯ ನೀಡುವಂತೆ, ಅವನ್ನು ತರ್ಕಬದ್ದವಾಗಿ ಸಮರ್ಥಿಸಿಕೊಳ್ಳುವಂತೆ ಚಿಂತನೆ ಮತ್ತು ನಡೆಗಳಲ್ಲಿ ಸ್ವಾತಂತ್ರ್ಯ, ಇತರರ ಭಾವನೆ ಮತ್ತು ಹಿತರಕ್ಷಣೆಗಳ ಬಗ್ಗೆ ಸೂಕ್ಷ್ಮತೆ, ನಮ್ಯತೆಯಿಂದ, ರಚನಾತ್ಮಕ ರೀತಿಗಳಲ್ಲಿ ಹೊಸ ಸನ್ನಿವೇಶಗಳಿಗೆ ಸ್ಪಂದಿಸಲು ಕಲಿಯುವುದು, ಪ್ರಜಾಸತ್ತಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಲು ಒಳ ಒತ್ತಾಸೆ, ಮತ್ತು ಸಮಾಜದಲ್ಲಿ ಬದಲಾವಣೆ ತರಲು, ಆರ್ಥಿಕ ಕಾರ್ಯಯೋಜನೆಗಳ ಸಲುವಾಗಿ ಕೆಲಸ ಮಾಡಲು ಸಾಮರ್ಥ್ಯ ಮುಂತಾದ ಕೆಲವು ವಿಶಾಲ ಗುರಿಗಳನ್ನು NCF 2005ರಲ್ಲಿ ಗುರುತಿಸಲಾಯಿತು.
ಕೇವಲ ಶಿಕ್ಷಣದ ಮತ್ತು ಕಲಿಕೆಯ ಚಟುವಟಿಕೆಗಳ ಮೂಲಕ ಮಾತ್ರ ಈ ಗುರಿಗಳನ್ನು ತಲುಪಲು ಸಾಧ್ಯ ಎಂಬುದು ನಿರ್ವಿವಾದ. ಮಕ್ಕಳು ಕಲಿಕೆಯ ಮೂಲಕ ಈ ನಡವಳಿಕೆಗಳನ್ನು ಅಳವಡಿಸಿಕೊಳ್ಳಬಹುದು. ಕೌಶಲಗಳನ್ನು, ಜ್ಞಾನವನ್ನು ಪಡೆಯಬಹುದು. ಶಿಕ್ಷಣದ ಗುರಿಗಳಲ್ಲಿಯೇ ಭಾಷಾಶಿಕ್ಷಣದ ಗುರಿಗಳು ಅಡಕವಾಗಿರುತ್ತವೆ. ಆಲಿಸಿದ್ದನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು, ಪಠ್ಯವನ್ನು ಕೇವಲ ಅಕ್ಷರಕ್ಷರವಾಗಿ ಓದುವುದಲ್ಲದೇ ಅರ್ಥಪೂರ್ಣವಾಗಿ ಓದಿಕೊಳ್ಳುವ ಸಾಮರ್ಥ್ಯ, ನಿರರ್ಗಳವಾಗಿ ಅಭಿವ್ಯಕ್ತಿಗೊಳಿಸುವ ಸಾಮರ್ಥ್ಯ ಮತ್ತು ಊಹಾತ್ಮಕ ಗ್ರಹಿಕೆ, ಕಲ್ಪನಾಶಕ್ತಿ, ಸಹೃದಯತೆ, ತರ್ಕಬದ್ದತೆ, ಹೋಲಿಕೆ, ವಿಶ್ಲೇಷಣೆಗಳಂತಹಾ ಉನ್ನತ ಭಾಷಾ ಕೌಶಲಗಳ ಬೆಳವಣಿಗೆಗಳನ್ನು ಭಾಷಾಶಿಕ್ಷಣದ ಗುರಿಗಳು ಎಂದು NCF 2005 ಗುರುತಿಸುತ್ತದೆ.
ವಿಶ್ವವಿದ್ಯಾಲಯ ಶಿಕ್ಷಣದ ಸಮಿತಿ 1948,ಮುದಲಿಯಾರ್ ಸಮಿತಿ 1952, ಕೊಠಾರಿ ಸಮಿತಿ 1968, ಹೊಸಶಿಕ್ಷಣ ನೀತಿ 1986 , ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು 2005ಗಳಂತಹಾ ಬೇರೆ ಬೇರೆ ವರದಿಗಳಲ್ಲ್ಲಿ ಶಾಲಾಶಿಕ್ಷಣದಲ್ಲಿ ಗ್ರಂಥಾಲಯದ ಪಾತ್ರವನ್ನು ಒತ್ತಿ ಹೇಳಲಾಗಿದೆ. ಶಾಲಾಗ್ರಂಥಾಲಯವನ್ನು ಶಿಕ್ಷಕರು, ಮಕ್ಕಳು ಮತ್ತು ಸಮುದಾಯದ ಸದಸ್ಯರು ಅವರ ಜ್ಞಾನ ಮತ್ತು ಕಲ್ಪನಾಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬೇಕಾದ ಸಂಪನ್ಮೂಲಗಳನ್ನು ನಿರೀಕ್ಷಿಸಬಹುದಾದ ಮತ್ತು ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳುವ ಬೌದ್ದಿಕ ತಾಣ: ಗಣಿತ, ವಿಜ್ಞಾನ, ಭೂಗೋಳ ಅಥವಾ ಇತರ ಯಾವುದೇ ವಿಭಾಗದವರಾಗಿದ್ದರೂ ಶಾಲಾಸಿಬ್ಬಂದಿಗಳಿಗೆ ಬೇಕಾದ ಪುಸ್ತಕಗಳನ್ನು ಪರಾಮರ್ಶಿಸಲು ಅವಕಾಶವಿರುವ, ಭಾಷಾಶಿಕ್ಷಕರಿಗಷ್ಟೇ ಅಲ್ಲದೇ ಎಲ್ಲ ಶಿಕ್ಷಕರಿಗೂ ಮಾಹಿತಿಗಳು ಲಭ್ಯವಿರುವ ಮುಕ್ತ ತಾಣವೇ ಶಾಲಾಗ್ರಂಥಾಲಯ ಎಂದು ಎನ್ ಸಿ ಎಫ್ 2005 ಚಿತ್ರಿಸುತ್ತದೆ. ಗ್ರಂಥಾಲಯವು ಅಲ್ಲಿನ ಸೌಲಭ್ಯವನ್ನುಪಯೋಗಿಸಿಕೊಂಡು ಶಿಕ್ಷಕರು ಮಕ್ಕಳು ಓದಿದ ಕತೆಯನ್ನು ಆಧರಿಸಿ ಸಂವಾದ, ಚರ್ಚೆಯ ತರಗತಿ ನಡೆಸಲು ಗ್ರಂಥಾಲಯವು ಶಿಕ್ಷಕರಿಗೆ ಅನುವು ಮಾಡಿಕೊಡುತ್ತದೆ ಎಂದೂ ಚಿತ್ರಿಸುತ್ತದೆ.

The story book of Kach Kach.
ಉದಾಹರಣೆಗೆ, ಶಿಕ್ಷಕರು ಶಾಲಾ ಗ್ರಂಥಾಲಯದಲ್ಲಿ ’ತಿತಲೀ’, ’ಪಂಖೋಂ ಕೀ ಕಿತಾಬ್’ ಅಥವಾ ’ಕಚ್ ಕಚ್’ ಕತೆ ಓದುತ್ತಿದ್ದಾರೆ ಎಂದು ಕಲ್ಪಿಸಿಕೊಳ್ಳಿ, ಮಕ್ಕಳು ಹೇಗೆ ಕತೆ ಅರಿತಿದ್ದಾರೆಂದು ತಿಳಿಯಲು ,ಜೋರಾಗಿ ಓದುವ ಗೋಷ್ಟಿಯಲ್ಲಿ, ಶಿಕ್ಷಕರು ಸಂವಾದ ಆರಂಭಿಸಿರಬಹುದು: ಕತೆಯ ಹಿನ್ನೆಲೆ ಹೇಳುತ್ತಿರಬಹುದು: ಕತೆಯ ದೃಶ್ಯಗಳನ್ನು ಅವರಿಗೆ ದೃಷ್ಟಾಂತದಂತೆ ತೋರಿಸುತ್ತಾ ಕತೆಯ ಹೂರಣ ಏನಿರಬಹುದೆಂದು ಊಹಿಸಲು ಅವರಿಗೆ ಕೇಳುತ್ತಿರಬಹುದು. ಒಟ್ಟಾರೆ ಅವರ ಕುತೂಹಲ ಕೆರಳಿಸುತ್ತಿರಬಹುದು. ಶಿಕ್ಷಕರು ಕತೆ ಮುಂದುವರೆದಂತೆ ಮಕ್ಕಳಿಗೆ ಅವರದೇ ರೀತಿಯಲ್ಲಿ ಕತೆಯನ್ನು ವ್ಯಾಖ್ಯಾನಿಸಲು ಅವಕಾಶ ಕೊಡುತ್ತಾ ಸಂವಾದಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಗುಂಪುಗಳ ಒಳಗೆ ಅಥವಾ ಗುಂಪುಗಳ ನಡುವೆ ಈ ತಿತಲೀ, ಪಂಖೋಂ ಕಿ ಕಿತಾಬ್ ಅಥವಾ ಕಚ್ ಕಚ್ ಕತೆಯ ಬಗ್ಗೆ ವಿವಿಧ ಅಬಿಪ್ರಾಯ, ದೃಷ್ಟಿಕೋನ, ವ್ಯಾಖ್ಯಾನಗಳ ಮೂಲಕ ಒಂದು ಘಟನೆಗೆ ಅನೇಕರು ಅನೇಕ ರೀತಿ ಭಿನ್ನವಾಗಿ ಸ್ಪಂದಿಸಬಹುದೆಂದು ಮಕ್ಕಳಿಗೆ ಮನವರಿಕೆ ಮಾಡಿಕೊಡುತ್ತಾರೆ, ಮಕ್ಕಳು ಕತೆಯನ್ನು ಹೇಳುತ್ತಿರುವಾಗ ಪಠ್ಯದ ಮುಖಾಂತರ, ಹಿನ್ನೆಲೆ ದೃಶ್ಯಗಳ ಮೂಲಕ ಅವರದೇ ಸ್ಪಂದನೆಗಳ ಮೂಲಕ ಅದದೇ ಪಾತ್ರಗಳು, ವಿಷಯಗಳು ಬೇರೆಬೇರೆ ರೀತಿಯಲ್ಲಿ ಎದುರಾಗಬಹುದೆಂದು ಕಾಣಲು ಸಮರ್ಥರಾಗುತ್ತಾರೆ. ಮಕ್ಕಳು ಮತ್ತು ಶಿಕ್ಷಕರ ನಡುವೆ ಹೀಗೊಂದು ಸಂಭಾಷಣೆ ಇಲ್ಲಿದೆ.
ಶಿಕ್ಷಕರು: (ಮಕ್ಕಳಿಗೆ ಕಚ್ ಕಚ್ ಪುಸ್ತಕದ ಮುಖಪುಟ ತೋರಿಸುತ್ತಾ) ಈ ಪುಸ್ತಕದಲ್ಲಿ ಏನಿದೆ ಎಂದು ನಿಮಗನಿಸುತ್ತದೆ?
ಮಗು ೧: ಇದು ಒಂದು ಮೊಲ ಕ್ಯಾರೆಟ್ ಅನ್ನು ನೆಡುತ್ತಿರುವ ಕತೆ
ಮಗು ೨: ಮೊಲ ಒಂದು ರೈತ. ಹೊಲದಲ್ಲಿ ಕೆಲಸ ಮಾಡುತ್ತಿದೆ.
ಮಗು ೩: ಮೊಲವೊಂದು ಕಾಡಿನಲ್ಲಿ ಓಡಾಡುತ್ತಾ ಆಹಾರಕ್ಕಾಗಿ ಹುಡುಕಾಡುತ್ತಿದೆ.
( ಇಲ್ಲಿ ಪ್ರತಿಯೊಂದು ಮಗುವೂ ತನ್ನದೇ ದೃಷ್ಟಿಕೋನದಿಂದ ನೋಡುತ್ತಿದೆ. ಒಂದು ಉತ್ತರ ಇನ್ನೊಂದು ಉತ್ತರದಂತೆ ಇರುವುದಿಲ್ಲ. ಮೊಲದೊಂದಿಗೆ ಅವರಿಗೆ ಈ ಮೊದಲೇ ಇದ್ದ ಅನುಭವ ಆಧರಿಸಿ ಮಕ್ಕಳು ಉಹಿಸುತ್ತಾರೆ, ಕಲ್ಪಿಸಿಕೊಳ್ಳುತ್ತಾರೆ. ಅವರ ಉತ್ತರಗಳನ್ನು ಸರಿ ಎಂದಾಗಲೀ ತಪ್ಪು ಎಂದಾಗಲೀ ಶಿಕ್ಷಕರು ಹೇಳುವುದಿಲ್ಲ.)
ಶಿಕ್ಷಕರು: ಅಕಸ್ಮಾತ್ ಮೊಲ ನಿಮಗೆ ಎದುರಾದರೆ ನೀವು ಏನು ಮಾಡುತ್ತೀರಿ?
ಮಗು ೧: ಅದನ್ನು ನಾನು ಮನೆಗೆ ತಂದು ನನ್ನೊಡನೆ ಇಟ್ಟುಕೊಳ್ಳುತ್ತೇನೆ.
ಮಗು ೨: ನಾನು ಅದನ್ನು ಹಿಡೀತೀನಿ, ಅದರ ಸಾಂಬಾರ್ ಮಾಡಿಸಿ ತಿಂತೀನಿ.
ಮಗು ೩: ನಾನು ಅದನ್ನು ಜೋಪಾನವಾಗಿ ನೋಡ್ಕೋತೀನಿ, ಅದಕ್ಕೆ ತಿನ್ನಲು ಆಹಾರ ಕೊಡ್ತೀನಿ.
(ಅವರ ಪ್ರತಿಕ್ರಿಯೆಗಳು ಅವರು ವಾಸಿಸುವ ವಾತಾವರಣವನ್ನು ಆಧರಿಸಿರುತ್ತದೆ. ಮೊಲವನ್ನು ತಿನ್ನುತ್ತೇನೆ ಎನ್ನುವ ಮಗುವು ಆ ಬಗೆಯ ಆಹಾರ ಪದ್ದತಿ ಹೊಂದಿರುತ್ತದೆ. ಮೊಲವನ್ನು ಜೋಪಾನ ಮಾಡುತ್ತೇನೆ ಎನ್ನುವ ಮಗುವಿನ ಆಹಾರ ಪದ್ದತಿ ಬೇರೆ ಇರುತ್ತದೆ. ಮಕ್ಕಳ ಗುಂಪುಗಳಲ್ಲಿನ ವಿಭಿನ್ನ ಪ್ರತಿಕ್ರಿಯೆಗಳು ಮಕ್ಕಳಿಗೆ ಜನರಲ್ಲಿರುವ ಅಭ್ಯಾಸ, ಜೀವನಶೈಲಿ, ಪ್ರತಿಕ್ರಿಯೆ, ಅಭಿಪ್ರಾಯ ಮತ್ತು ದೃಷ್ಟಿಕೋನಗಳ ವೈವಿಧ್ಯತೆಯ ಅರಿವು ಮೂಡಿಸುತ್ತದೆ.)
ಶಿಕ್ಷಕರು: ನೀವು ಅಮ್ಮ ಮೊಲದ ಜಾಗದಲ್ಲಿದ್ದರೆ ಏನು ಮಾಡುತ್ತಿದ್ದಿರಿ?
ಮಗು ೧: ನಾನು ಮರಿಮೊಲಕ್ಕೆ ಹೊಡೆದು ಅದರ ಎಲ್ಲಾ ಹಣ್ಣು ಮತ್ತು ತರಕಾರಿಗಳನ್ನು ತೆಗೆದುಕೊಳ್ಳುತ್ತಿದ್ದೆ.
ಮಗು ೨: ನನ್ನ ಹೂಕೋಸನ್ನು ಆ ಮರಿಯೊಂದಿಗೆ ಹಂಚಿಕೊಳ್ಳುತ್ತಿದ್ದೆ.
( ಮಕ್ಕಳು ಕತೆಯನ್ನು ರೂಪಿಸುತ್ತಲೇ ಪಠ್ಯದ ಸಹಾಯದಿಂದ, ಹಿನ್ನೆಲೆ ದೃಶ್ಯಾವಳಿಗಳ ಮೂಲಕ, ಅವರದೇ ಪ್ರತಿಸ್ಪಂದನೆಗಳ ಮೂಲಕ ಅವವೇ ಪಾತ್ರಗಳನ್ನು, ವಿಷಯಗಳನ್ನು ಬೇರೆ ಬೇರೆ ರೀತಿಯಲ್ಲಿ ನಿರೂಪಿಸಬಹುದೆಂದು ಅರಿಯಲು ಸಮರ್ಥರಾಗುತ್ತಾರೆ.)
ಈ ಸನ್ನಿವೇಶದ ಮೂಲಕ ಮಕ್ಕಳು ಭಾಷಾಶಿಕ್ಷಣದ ಗುರಿಗಳನ್ನು ಈಡೇರಿಸಲು ಶಾಲಾ ಗ್ರಂಥಾಲಯವು ತುಡಿಯುತ್ತದೆ. ಎಂದು ತಿಳಿದುಬರುತ್ತದೆ. ಮಕ್ಕಳಲ್ಲಿ ಆಲಿಸಿದ್ದನ್ನು ಅರ್ಥಮಡಿಕೊಳ್ಳುವ ಸಾಮರ್ಥ್ಯ ಬೆಳೆಸುವುದು, ಪಠ್ಯವನ್ನು ಕೇವಲ ಅಕ್ಷರಕ್ಷರವಾಗಿ ಓದುವುದಲ್ಲದೇ ಅರ್ಥಪೂರ್ಣವಾಗಿ ಓದಿಕೊಳ್ಳುವ ಸಾಮರ್ಥ್ಯ, ನಿರರ್ಗಳವಾಗಿ ಅಭಿವ್ಯಕ್ತಿಗೊಳಿಸುವ ಸಾಮರ್ಥ್ಯ ಮತ್ತು ಊಹಾತ್ಮಕ ಗ್ರಹಿಕೆ, ಕಲ್ಪನಾಶಕ್ತಿ, ಸಹೃದಯತೆ, ತರ್ಕಬದ್ದತೆ, ಹೋಲಿಕೆ, ವಿಶ್ಲೇಷಣೆಗಳಂತಹಾ ಉನ್ನತ ಭಾಷಾ ಕೌಶಲಗಳ ಬೆಳವಣಿಗೆಗಳನ್ನು ಗ್ರಂಥಾಲಯವು ಆಗು ಮಾಡುತ್ತದೆ. ಇದರಿಂದಾಗಿ ಶಿಕ್ಷಣದ ಗುರಿಗಳನ್ನು ತಲುಪಲು ಸಹಾಯವಾಗುತ್ತದೆ. ಮಕ್ಕಳು ನಿರ್ಧಾರಗಳನ್ನು ತಳೆಯುವ ಸಾಮರ್ಥ್ಯ ಹೊಂದಿ ಅವನ್ನು ತರ್ಕಬದ್ದವಾಗಿ ಸಮರ್ಥಿಸಿಕೊಳ್ಳುವಂತೆ ಚಿಂತನೆ ಮತ್ತು ನಡೆಗಳಲ್ಲಿ ಸ್ವಾತಂತ್ರ್ಯವನ್ನು, ಇತರರ ಭಾವನೆ ಮತ್ತು ಹಿತರಕ್ಷಣೆಗಳ ಬಗ್ಗೆ ಸೂಕ್ಷ್ಮತೆಯನ್ನು, ನಮ್ಯತೆಯಿಂದ, ರಚನಾತ್ಮಕ ರೀತಿಗಳಲ್ಲಿ ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯುತ್ತಾರೆ.
Reference: ಪರಾಮರ್ಶನ:
GijubhaiBadheka, Divasvapna-An Educators’s Reverie. –NBT New Delhi
From Classroom to Aims-RohitDhankar
John Dewey, Democracy and Education-An introduction to the Philosophy of Education-Chapter No 8 “Aims in Education” page no 108 to 120, Aakar Books-Delhi
JiwantiBist and others -PankhokiKitab, Room to Read India, New Delhi
Melvin and Gilda Burger-Titliya, Scholastic-New Delhi
National Curriculum Framework 2005-NCERT Chapter 4- School and Classroom Environment. Page No. 91, NCERT-Delhi.
National Focus Group on Teaching of Indian Languages-NCERT-New Delhi
Padhe Bharat Badhe Bharat-Early reading and writing with comprehension and Early Mathematics Program- Dept. of School Education and Literacy, MHRD
Krishna Kumar, Need of the reading culture-lecture by at Udaipur 2007
Report of the Mudliyar commission-1952 Govt of India 7th Chapter (Dynamic methods of teaching) page no 89 to 94
Sangita Gupta- Kacha Kacha, Children Book Trust, New Delhi.
(ಹೆಸರು ಗಜೇಂದ್ರ ರಾವತ್ ಇವರು ಲೇಖಕರು ಹಾಗೂ ಸುಮಾರು 14 ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತೀದ್ದಾರೆ. ಅಲ್ಲದೆ ಇವರು ʼಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿರುವ ಜಿಗ್ನ್ಯಾಸ ಇನ್ಸ್‌ಟ್ಯುಟ್ ಆಪ್ ಡವ್‌ಲಪ್‌ಮೆಂಟ್‌ನ ಸಂಸ್ಥಾಮಕರಾಗಿದ್ದಾರೆ. ಏಜುಕೇಶನ್ ಮಿರರ್ ತಂಡದ ಸದಸ್ಯರಾಗಿದ್ದಾರೆ ಅಲ್ಲದೆ ರೂಮ್ ಟು ರೀಡ್ , ದಿಗಂತರ ಹಾಗೂ ಟಾಟಾ ಇನಿಷೇಟಿವ್‌ನಂತಹ ಸುಪ್ರಸಿದ್ದ ಸಂಸ್ಥೆಗಳಲ್ಲಿ ಕೇಲಸ ಮಾಡಿರುವ ಅನುಭವ ಇವರದ್ದಾಗಿದೆ. ಇವುಗಳ ಜೋತೆಗೆ ಇವರು ರಾಜಸ್ಥಾನ ಹಾಗೂ ಚತ್ತಸಗಡ್ ಸರ್ಕಾರದ ಜೀತೆಗೆ ಗಣಿತ ಪಠ್ಯಪುಸ್ತಕ ರಚಿಸುವಲ್ಲಿ ಇವರ ಕೊಡುಗೆ ಅಪಾರ ಎಂದು ಹೇಳಬಹುವುದು. ಇವೆಲ್ಲವೂಗಳ ಜೋತೆಯಲ್ಲಿ ಇವರು ಲಂಡನ್ ಯುನಿವರ್ಸಿಟಿಯ ಇನ್ಸಿಟ್ಯುಟ್ ಆಪ್ ಏಜುಕೇಶನ್‌ನಲ್ಲಿ ಎಂ.ಎ ಮಾಡಿರುತ್ತಾರೆ.(ಕರಿಕುಲಮ್ ಪೆಡೊಗಗಿ ಮತ್ತು ಅಸೈನ್ಮೆಂಟ್) . ಈ ಲೇಖನವನ್ನು ಓದಿ ಹಾಗೂ ತಮ್ಮ ಅಭಿಪ್ರಾಯವನು ಟಿಪ್ಪಣಿಯ ರೂಪದಲ್ಲಿ ತಿಳಿಸಬೇಕಾಗಿ ಕೊರಿಕೆ.)
इस लेख के बारे में अपनी टिप्पणी लिखें